Aditya Hegde
Captain Reddy
V Sem., EI
ವಿಶಾಲವಾದ ನಮ್ಮ ಕಾಲೇಜು ಆವರಣದಲ್ಲಿ ಹಚ್ಚ ಹಸಿರಿನ ನಡುವೆ, ಮರಗಳಿಗೇ ಪೈಪೋಟಿ ಕೊಡುವಂತಹ ಎತ್ತರ, ಇನ್ನೇನು ಜಗತ್ತು ಮುಳುಗುತ್ತಿದೆ ಎನ್ನುವಾಗ ಮೂಡುವ ನಿಶಬ್ದತೆಯನ್ನು ಕಂಡು ಯಾರಿರಬಹುದು ಈ ಹುಡುಗ ಎಂದು ಅವನ ಹತ್ತಿರ ಹೋಗಿ ನೋಡಿದಾಗ ಅವನ ಕಣ್ಣಿನ ನೋಟದಲ್ಲೇ ನಿಮಗೆ ಭಯ ಹುಟ್ಟಿಸಬಲ್ಲ ಎಂದರೆ ನೀವು ಬಹುಶಃ ನಮ್ಮ 'ರೆಡ್ಡಿ ಭಾಯ್' ಎಂದೇ ಖ್ಯಾತಿಯನ್ನು ಹೊಂದಿರುವ ಆದಿತ್ಯನನ್ನ ನೋಡಿರುತ್ತೀರಿ.
ಉಡುಪಿಯ ಸಾದಾ ಸೀದಾ ಹೈದ ಎಂದು ಪಕ್ಕಾ ಮಂಗಳೂರು ಶೈಲಿಯಲ್ಲಿ ಮಾತಾಡುವ ಈತ ಮೊದಲ ಭೇಟಿಯಲ್ಲಿ 'ಅಮಾಯಕ' ಅಂತ ಅನಿಸಿದರೂ ತುಂಬಾ ಜಾಣ್ಮೆಯಿಂದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾನೆ. ಇವನಲ್ಲಿ ಒಳ್ಳೆ ಕುಶಲತೆಯ ಛಾಯಾಗ್ರಾಹಕನು ಸಹ ಅಡಗಿದ್ದಾನೆ. ಯಾರೂ ಮೆಚ್ಚಿಸಲಾಗದ ನಮ್ಮೆಲ್ಲರ ಗುರುಮಾತೆಯವರ ಫೋಟೋಗಳನ್ನು ತೆಗೆದು ಸ್ವಲ್ಪ ಮಟ್ಟಿಗೆ ಅವರನ್ನು ಮೆಚ್ಚಿಸಿರುವ ಕೀರ್ತಿ ಇವನಿಗಿದೆ. ಉದ್ದನೆಯ ಕೈಗಳು ಇದ್ದರೆ 'ಆಜಾನುಬಾಹು' ಎಂದು ತಿಳಿದಿದ್ದ ಇವನು, ಅವನ ಕೈಗಳು ಇನ್ನೇನು ಮೊಣಕಾಲಿನ ವರೆಗೂ ಇದೆ! ಆದ್ದರಿಂದ ತಾನು ಆಜಾನುಬಾಹು ಎಂಬ ತಪ್ಪು ತಿಳುವಳಿಕೆಯಲ್ಲಿ ಬದುಕುತ್ತಿದ್ದ. ತನ್ನ ಕಲ್ಪನೆ ಸುಳ್ಳು ಎಂದು ಅರಿತು ಬಹಳ ಮನ ನೊಂದು ಹೇಗಾದರು ಮಾಡಿ ಆಜಾನುಬಾಹುವಾಗಬೇಕೆಂದು ಕೆಲವು ಮೂಲಿಕೆಗಳನ್ನು ಹುಡುಕುತ್ತಿದ್ದಾನೆ ಎಂಬುದು ಗಾಳಿಸುದ್ದಿ.
ಈತನಿಗೆ ತನ್ನ ಗೆಳೆಯರೊಡನೆ ಸುತ್ತಾಡುವುದು ಅಂದ್ರೆ ಬಹಳ ಇಷ್ಟ. ತನ್ನ ಊರಿನ ಮೇಲೆ ಅಪಾರವಾದ ಪ್ರೀತಿ ಇದೆ. ಊರಿನ ತನ್ನ ತೋಟದಲ್ಲೇ ಹೆಚ್ಚು ಸಮಯ ಕಳೆಯುವ ಇವನಿಗೆ ಈಜುವುದು ಸಹ ಇಷ್ಟ ಅಂತೆ. ಕೆರೆಗಳಲ್ಲಿ ಈಜು ಕಲಿತಿರುವ ಇವನು ತನ್ನ ಪ್ರತಿಭೆಯು ಕೇವಲ ಕೆರೆಗಳಿಗೆ ಸೀಮಿತವಾಗದೆ ನದಿಗಳಿಗೂ ವಿಸ್ತರಿಸಬೇಕೆಂದು ಹಲವು ಯೋಜನೆಗಳನ್ನು ರೂಪಿಸಿ, ಅದನ್ನು ಕಾರ್ಯರೂಪಕ್ಕೆ ತರಲು 'ಒಳ್ಳೆ ಕಾಲ'ದ ಪ್ರತೀಕ್ಷೆಯಲ್ಲಿದ್ದಾನೆ ಎನ್ನುವುದು 'ಅಖಿಲ ಎಡ್-ಬಿಡಂಗಿ ಲೇಟೆಸ್ಟ್ ವಿಷಯಗಳು' ಸಂಘದ ಒಬ್ಬ ಪ್ರಮುಖ ವ್ಯಕ್ತಿಯಿಂದ ಕೇಳಿಬಂದಿದೆ. ತನ್ನ ವಿಚಿತ್ರ ಕುತೂಹಲದ ಪ್ರಶ್ನೆಗಳಿಗೆ ಹೆಸರುವಾಸಿಯಾಗಿರುವ ಇವನು, ತನಗೆ ಕೇಳುವ ಎಲ್ಲಾ ಬಗೆಯ (ಒಂದು ವಾಕ್ಯದಲ್ಲಿ ಉತ್ತರಿಸಿ, ಸಂದರ್ಭ ಸಹಿತ ಸ್ವಾರಸ್ಯ ಹೇಳಿ, ಅನಿಸಿಕೆ-ಅಭಿಪ್ರಾಯಗಳನ್ನು ವಿಶ್ಲೇಷಿಸಿ... ಮುಂತಾದವು) ಪ್ರಶ್ನೆಗಳಿಗೆ ಕೇವಲ ಒಂದು ಪದದಲ್ಲಿ ಉತ್ತರಿಸುವ ವಿಶಿಷ್ಟ ಪ್ರತಿಭೆಯುಳ್ಳವನು. ಇತ್ತೀಚಿನ ದಿನಗಳಲ್ಲಿ ಈ ಪ್ರತಿಭೆಯನ್ನು, ಸಹ ಸಂಪಾದಕರ ಡಿoಚಿsಣ ಮಾಡಲು ಉಪಯೋಗಿಸುತ್ತಾನೆ ಎಂದು ಮೇಲೆ ತಿಳಿಸಿರುವ ಸಂಘದ ಪ್ರಮುಖರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇವನ ಅಸ್ತಿತ್ವದಿಂದಲೆ ಗೌರವಾನ್ವಿತ ಗುರುಮಾತೆಯವರ ಶಿಷ್ಯ ಸಮೂಹಕ್ಕೆ ಒಂದು ಕಳೆ ಬಂದಿದೆ ಎಂದರೆ ತಪ್ಪಾಗದು. ಅವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿರುವವರಲ್ಲಿ ಒಬ್ಬನಾದ ಇವನಿಗೆ ಪದ್ಯಗಳನ್ನು ಷಟ್ಪದಿಯ ರೂಪದಲ್ಲಿ ಬರೆಯುವುದು ಬಹಳ ಸಲೀಸು. ಅವನ ವಿಶಿಷ್ಟ ವಿಚಾರಧಾರೆಗಳಿಗೆ ಹೊಸ ಆಯಾಮವನ್ನು ನೀಡುತ್ತಾ ವಿವಿಧ ಪ್ರಕಾರಗಳಲ್ಲಿ ಅದನ್ನು ವರ್ಣಿಸುವ ಪದ ಮಾಂತ್ರಿಕ.
ಎರಡನೇ ವರ್ಷದ ಇ.ಐ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಈ ಕನ್ನಡಾಭಿಮಾನಿಯ ಜೀವನದಲ್ಲಿ ಸುಖ ಸಂತೋಷಗಳು ತುಂಬಿರಲಿ ಎಂದು ಆಶಿಸುತ್ತೇನೆ.














