Shreyas S
Influenzaa
Graduated, ME
ಈ ವ್ಯಕ್ತಿ ನೋಡೋಕೆ ರೆಬೆಲ್ ಅನ್ನಿಸಬಹುದು ಆದರೆ ಈ ವ್ಯಕ್ತಿ ಅಷ್ಟು ಒಳ್ಳೆ ಮನಸ್ಸು ಇರೋದು ಬಹಳ ಅಪರೂಪ. ಶ್ರೇಯಾ ಎಂದೇ ಹೆಸರಾಗಿರುವ ಇವಳು* ಓಹ್ ಕ್ಷಮೆ ಇರಲಿ ಈ ವ್ಯಕ್ತಿ ಇವಳಲ್ಲ ಇವನು! ಕನ್ನಡ ವಿಭಾಗದ ಒಳ್ಳೆ ಹುಡುಗ ಯಾರಪ್ಪ ಅಂದ್ರೆ ಅಲ್ನೋಡಿ ನಮ್ಮ ಬ್ರೋ ಕಾಣ್ತಿದರ ಅಂತ ಇವನನ್ನ ಬೆರಳು ಮಾಡಿ ತೋರಿಸ್ತಾರೆ. ಈ ಸಾಲು ಓದುತ್ತಿರುವಾಗ ಏನಪ್ಪ ಮರ್ಯಾದೆ ಕೊಡ್ತಾ ಇರೋದಾ ಅಥವಾ ವ್ಯಂಗ್ಯ ಮಾಡ್ತಾ ಇರೋದಾ ಅಂತ ಸಂಶಯ ಬರೋದು ಖಚಿತ. ಸಂಶಯ ಬೇಡ ನಿಜವಾಗಿಯೂ ಈತ ಸುಜನರಲ್ಲಿ ಒಬ್ಬ! ಕಿರಿಯರಾಗಿರಲಿ ಹಿರಿಯರಾಗಿರಲಿ, ಎಲ್ಲರಿಗೂ ಒಂದೇ ಭೇಟಿಯಲ್ಲಿಯೇ ಇವನು ಹಳೆ ಪರಿಚಯ ಅನ್ನಿಸುವಂತೆ ಮಾತಿನಲ್ಲೇ ಜಾದು ಮಾಡಿಬಿಡುತ್ತಾನೆ. ನೀವ್ಯಾರಾದರು ಇವನೊಂದಿಗೆ ಮಾತನಾಡುತ್ತಿದ್ದರೆ ಇವನು ನಮ್ಮ ಸಮ ವಯಸ್ಕರನು ಎಂದು ಭಾವಿಸೋದು ಖಚಿತ. ಇವನಿಗೆ ಹತ್ತಿರದವರು ಕರೆ ಮಾಡಿ ಸಣ್ಣ ತೊಂದರೆ ಆಗಿದೆ ಸಹಾಯ ಬೇಕಿತ್ತು ಅಂದರೆ ಸಾಕು ತನ್ನದೇನೇ ಕೆಲಸವಿದ್ದರು ಅದನ್ನು ಅಲ್ಲಿಯೇ ಬಿಟ್ಟು ಕೆಲವೇ ನಿಮಿಷಗಳಲ್ಲಿ ಬಂದುಬಿಡುತ್ತಾನೆ, ಅಷ್ಟು ಸಹೃದಯಿ ಈತ!
ಇವನಿಗೆ ಹೊಸ ಹೊಸ ಜಾಗಗಳನ್ನು explore ಮಾಡೋದು ಅಂದ್ರೆ ಬಹಳ ಇಷ್ಟ. ವಾರಕ್ಕೆ ಮೂರು-ನಾಲ್ಕು ಜಾಗಗಳಿಗೆ ಸಂಚರಿಸುತ್ತಾ ಇರುತ್ತಾನೆ. ಇತ್ತೀಚಿಗಷ್ಟೇ ದೇಶವನ್ನೇ ದಾಟಿ ‘ಅಂಡಮಾನ್’ಗೂ ಒಂದು ಪ್ರವಾಸ ಮಾಡಿರುವನು. ಸಂಪಾದಕ ಮಂಡಳಿಯಲ್ಲಿ ಯಾರೇ ಆಗಲಿ ಇವನೊಂದಿಗೆ ಮಾತಿಗೆ ನಿಂತರೆ ಸುಲಭಕ್ಕೆ ಗೆಲ್ಲಲು ಸಾಧ್ಯವಿಲ್ಲ. ನೀವು ಸರಿ ಎಂದರೆ ತಪ್ಪು ಎನ್ನುತ್ತಾನೆ. ತಪ್ಪು ಎಂದರೆ ಸರಿ ಎನ್ನುತ್ತಾನೆ. ಕೊನೆಗೆ ನೀವೇ ಸಾಕು ಶ್ರೇಯಸ್ ಎಂದುಕೊಂಡು ಸೋಲನೊಪ್ಪಿಕೊಳ್ಳಬೇಕು. ಅಂತಹ ಚಾಲಾಕಿ ವಾದಗಾರ ಇವನು. ಇವನೊಂದಿಗೆ ಪ್ರತಿ ಬಾರಿ ವಾದಕ್ಕೆ ನಿಲ್ಲುವ ನಾನು ಒಮ್ಮೆ ಇನ್ನೇನು ವಾದ ಸೋಲುತ್ತೇನೆ ಎನ್ನುವ ಸಮಯದಲ್ಲಿ ‘ಆಯ್ತು ಕಣೋ, ನೀನ್ ಹೇಳಿದ್ದೆ ಕರೆಕ್ಟು ತಗಡು ಶ್ರೇಯಸ್’ ಎಂದು ಹೇಳಿ ಅವನನ್ನು ಗಪ್ ಚುಪ್ ಮಾಡಿದ್ದು ಉಂಟು. ನನ್ನ ಹಾಗೆ Non-veg ಪ್ರಿಯನಾದ ಇವನು, ಈ ಬಾರಿ ಮಂಡಳಿಯಲ್ಲಿ non-vegetarian ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಬಹಳ ಹೆಮ್ಮೆ ಪಡುತ್ತಿದ್ದಾನೆ. ಈ ಮೈಸೂರಿನ ಹೈದನಿಗೆ ಮೈಸೂರಿನ ಯಾವ ಸ್ಥಳಕ್ಕೆ ಹೋಗುವ ದಾರಿಯ ನಕ್ಷೆ ಕೇಳಿದರು ತಟ್ ಅಂತ ಹೇಳುವನು. ಪ್ರತಿಯೊಂದು ಒಕ್ಕೂಟದಲ್ಲಿ ತಪ್ಪದೆ ಹಾಜರಿರುವ ಇವನು ವೋಟಿಂಗ್ ಆಗುವಾಗ ಹೊಸ ಸಂಪಾದಕರನ್ನು ಸೂಚಿಸಿ ಏನೇ ಪ್ರಶ್ನೆ ಕೇಳಿದರು ಎಲ್ಲ ಗೊತ್ತಿದ್ದರೂ ತನಗು ಏನೂ ತಿಳಿದಿಲ್ಲ, ವಿವರಿಸಿ ಹೇಳಿ ಎಂದು ಕುಚೇಷ್ಟೆ ಮಾಡುತ್ತಾನೆ. ಸದ್ಯಕ್ಕೆ ವಯಸ್ಸಿನಲ್ಲಿ ಹಿರಿಯ ಸಂಪದಕರಾಗಿದ್ದರು, ಗುಣದಲ್ಲಿ ಇನ್ನೂ ಮಂಗನಾಟ ಮಾಡಿಕೊಂಡಿರುತ್ತಾನೆ. ಸಂಪಾದಕ ಮಂಡಳಿಯಲ್ಲಿ ಎಲ್ಲರೂ ಇಷ್ಟಪಡುವ ಹಾಗೂ ಎಲ್ಲರನ್ನೂ ಇಷ್ಟ ಪಡುವ ವ್ಯಕ್ತಿ ಎಂದರೆ ಇವನೇ! ಒಳ್ಳೆಯ ಸ್ನೇಹಿತ, ಒಳ್ಳೆಯ ಮಾರ್ಗದರ್ಶಕ, ಒಳ್ಳೆಯ ಮಾತುಗಾರ ಅಷ್ಟೇ ಅಲ್ಲ ಚಿಂದಿಚಿತ್ರಾನ್ನ ಬೂಂದಿ ಮೊಸರನ್ನದಂತೆ ಕುಣಿತ ಹಾಕುವ ನರ್ತಕ. ಒಟ್ಟಾರೆ ಸಕಲಗುಣವಲ್ಲಭ ಈ ಶ್ರೇಯಸ್. ಇವನ ಜೀವನ ಅತ್ಯಂತ ಸಿಹಿಯಾಗಿ, ಖುಷಿ-ಖುಷಿಯಾಗಿ ಸುಖಕರವಾಗಿರಲಿ ಎಂದು ಆಶಿಸುವೆ.











































