Poornima Hegde
Bundboxy
Graduated, CSE
ಹೆಸರಿಗೆ ತಕ್ಕಂತೆ ಹುಣ್ಣಿಮೆ ಬೆಳಕಿನ ತಂಪಿನಂತೆ ಸದಾ ಮೊಗದಲ್ಲಿ ನಗೆಯನ್ನು ಹೊತ್ತಿರುವ ಶಿರಸಿಯ ಕುವರಿ. ತಂದೆ ತಾಯಿಯರ ಮುದ್ದಿನ ಮಗಳಾದ ಇವಳು ಮೂರು ತಮ್ಮಂದಿರ ಅಕ್ಕರೆಯ ಅಕ್ಕ. ಅಕ್ಕರೆಯೊಂದಿಗೆ ಅವರ ಆಟ-ಕಾಟಗಳನ್ನು ತಡೆದುಕೊಳ್ಳುವ ಸಹನಾಮಯಿ. ಕೂಡು ಕುಟುಂಬದ ಈ ಕುಡಿ ಊರಿಂದ ಎಲ್ಲಿಗೇ ಹೊರಟರೂ ಮನೆಮಂದಿ ಎಲ್ಲರಿಗೂ ಬೈ ಹೇಳುವ ಅರ್ಧ ಗಂಟೆಯ ಕಾರ್ಯಕ್ರಮವನ್ನು ಮುಗಿಸಿಯೇ ಹೊರಡಬೇಕು. ಸ್ನೇಹಿತರೊಂದಿಗೆ ಜಾಲಿ ಮಾಡುವ ಈ ಜಾಣೆ ಗಣಕ ತಂತ್ರಜ್ಞಾನದ ವಿದ್ಯಾರ್ಥಿನಿಯಾಗಿ ಉನ್ನತಿ ಹೊಂದುತ್ತಿದ್ದಾಳೆ. ಮೈಸೂರಿನಲ್ಲಿ ಹಾಲಿಯಾಗಿ ಪಿಜಿಯಲ್ಲಿ ಇರುವ ಈ ಪೋರಿ ಅಲ್ಲಿನ ಹುಡುಗಿಯರ ಸಂಘದ ಗ್ಯಾಂಗ್ ಲೀಡರ್ ಎನ್ನಬಹುದು. ಈಕೆ ಗಾಸಿಪ್ ರಾಣಿ ಕೂಡ ಹೌದು ಎಂದು ನಮ್ಮ ಗುಪ್ತಾಚರರೊಬ್ಬರು ಮಾಹಿತಿ ನೀಡಿರಲು, ನಿಮಗೆ ಯಾವುದೇ, ಯಾರದ್ದೇ ಮಾಹಿತಿ ಬೇಕಿದ್ದರೂ ಇವಳನ್ನು ಸಂಪರ್ಕಿಸಬಹುದು. ಪಿಜಿಯಲ್ಲಿರುವ ಕೆಟಲ್‌ನಲ್ಲೇ ಮ್ಯಾಗಿ, ಮೊಮೊ ಹೀಗೆ ವಿವಿಧ ಖಾದ್ಯಗಳನ್ನು ತಯಾರಿಸುವ ಹರಸಾಹಸಕ್ಕೆ ಇವಳದ್ದೇ ಮುಂದಾಳತ್ವ. ಈಕೆ ಓರ್ವ ಸ್ವಯಂ ಫ್ಯಾಶನ್ ಡಿಸೈನರ್ ಕೂಡ ಹೌದು. ಉದ್ದನೆಯ ಬಟ್ಟೆಗಳನ್ನು ತುಂಡಾಗಿಸಿ ಕ್ರಾಪ್ ಟಾಪನ್ನಾಗಿಸಿ ಧರಿಸುತ್ತಾಳೆ. ಸೋಮಾರಿತನಕ್ಕೆ ಇವಳು ರಾಯಭಾರಿ. ಇವಳನ್ನು ಸದಾ ನಿದ್ದೆ ಮಾಡುವ ಪ್ರಾಣಿಯಾದ ಕೋಲಾವೆಂದೂ ಕರೆಯುತ್ತಾರೆ.
ಅಪ್ಪೇಮಿಡಿ ಉಪ್ಪಿನಕಾಯಿಯ ರುಚಿಗೆ ಸದಾ ಬಾಯಲ್ಲಿ ನೀರೂರುವ ಇವಳಿಗೆ ಹವ್ಯಕ ಅಡಿಗೆಗಳೆಂದರೆ ಅಚ್ಚು ಮೆಚ್ಚು. ತನ್ನ ಊರು-ಬೇರುಗಳ ಮೇಲೆ ಅಪಾರ ಗೌರವ, ಪ್ರೀತಿ ಹೊಂದಿದ್ದಾಳೆ. ಶಿರಸಿಯಲ್ಲಿ ಪ್ರತೀ ವರ್ಷ ನಡೆಯುವ ಮಾರಿಕಾಂಬಾ ಜಾತ್ರೆ ಹಾಗು ಬೇಡರವೇಶಕ್ಕೆ ಇವಳದ್ದು ಹಂಡ್ರೆಡ್ ಪಸೆರ್ಂಟ್ ಅಟೆಂಡೆನ್ಸ್. ತಮ್ಮೂರಿನ ತೋಟದಲ್ಲಿ ಪರಿಸರ ಮತ್ತು ಪ್ರಾಣಿಗಳೊಂದಿಗೆ ಮಿಳಿತಳಾದಳೆಂದರೆ, ಮನರಂಜನೆಗೆ ಅಂತರ್ಜಾಲವೇಕೆ ಎನ್ನುವಷ್ಟು ಅವುಗಳನ್ನು ಇಷ್ಟಪಡುತ್ತಾಳೆ. ಆದರೆ ತನ್ನ ಸುತ್ತಾ ಮುತ್ತಾ ಶ್ವಾನಗಳಿರಬಹುದೆಂಬ ಸುಳಿವು ಸಿಕ್ಕರೆ ಅಲ್ಲಿಂದ ಕ್ಷಣದಲ್ಲೇ ಅಪ್ರತ್ಯಕ್ಷಳಾಗುತ್ತಾಳೆ. ಇವಳಿಗೆ ಬೆಟ್ಟ ಗುಡ್ಡ ಹತ್ತುವುದೆಂದರೆ ಅಚ್ಚುಮೆಚ್ಚು, ಟ್ರೆಕ್ ಎಂತುಸಿಯಾಸ್ಟ್ ಎಂದೂ ಕರೆಯಬಹುದು. ಸೀರಿಯಲ್‌ಗಳ ಸಹವಾಸಕ್ಕೆ ಹೋಗದ ಈಕೆ ಭಯಾನಕ ಹಾರರ್ ಸಿನಿಮಾವನ್ನು ವೀಕ್ಷಿಸುತ್ತಾ ಅಲ್ಲಿ ಬರುವ ದೆವ್ವ ಭೂತಗಳ ಲೇವಡಿ ಮಾಡಿ ನಗುನಗುತ್ತಾ ನೋಡುವಳೆಂಬುದು ಆಪ್ತಮಿತ್ರದ ನಾಗವಲ್ಲಿಯಿಂದ ಬಂದ ಸುದ್ದಿ.
ದಿನಪತ್ರಿಕೆಯಲ್ಲಿ ಅಜ್ಜನೊಂದಿಗೆ ಪದಬಂಧ ಬಿಡಿಸುತ್ತಾ ಕನ್ನಡದಲ್ಲಿ ಇವಳ ಕೈಚಳಕವನ್ನು ಹೆಚ್ಚಿಸಿಕೊಂಡಿದ್ದಾಳೆ. ತನ್ನ ವಿಶಿಷ್ಟ ಬರವಣಿಗೆ ಶೈಲಿಯಿಂದ ಎಲ್ಲರ ಮನ ಗೆದ್ದಿರುವ ಈಕೆ ವ್ಯಾಕರಣ, ಛಂದಸ್ಸುಗಳಲ್ಲೂ ಅಪಾರ ಜ್ಞಾನ ಹೊಂದಿದ್ದಾಳೆ. ಸಂಸ್ಕೃತ ಶ್ಲೋಕಗಳನ್ನು ಬಾಯ್ಪಾಟ ಮಾಡಿಕೊಂಡಿರುವುದಲ್ಲದೇ ಅವುಗಳ ಅರ್ಥವನ್ನೂ ತಿಳಿಯುವುದರಲ್ಲಿ ಹುಮ್ಮಸ್ಸು ತೋರಿಸುತ್ತಾಳೆ. ಸೌಮ್ಯ ಸ್ವಭಾವದ ಈಕೆ ಸಂದರ್ಶನ ಮಾಡಲು ಕೂತರೆ ಬೆವರಿಳಿಸುವಂತೆ ಚುರುಕು ಪ್ರಶ್ನೆಗಳನ್ನು ಮಂದಹಾಸದಿಂದಲೇ ಕೇಳುತ್ತಾಳೆ.
ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ಅದರ ಪರಿಣಾಮಗಳನ್ನು ವಿವರಿಸುತ್ತಾ ಮಾರ್ಗದರ್ಶನ ನೀಡುವುದರಲ್ಲಿ ಎತ್ತಿದ ಕೈ. ಮಂಡಳಿಯ ಕೆಲಸಗಳೆಲ್ಲವನ್ನೂ ಕ್ರಿಯಾತ್ಮಕತೆಯಿಂದ ಕೂಡಿಸಿ, ಕೊಟ್ಟ ಗಡುವಿಗೂ ರಿಮೈಂಡರ್ ಎನ್ನುವಂತೆ ಕೆಲಸ ಮುಗಿಸಿರುತ್ತಾಳೆ. ತೆಗೆದುಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವ ಇವಳ ಕಾರ್ಯವೈಖರಿ ಮಂಡಳಿಯ ಪ್ರತಿಯೊಬ್ಬ ಸದಸ್ಯರಿಗೂ ಮಾದರಿ. ಉಪ್ಪಿಲ್ಲದ ಆಹಾರ ಸಪ್ಪೆಯೆಂಬಂತೆ ಪೂರ್ಣಿಮಾ ಮಂಡಳಿಯ ಬೆನ್ನೆಲುಬಾಗಿದ್ದಾಳೆ. ತನ್ನ ಸಹ ಸಂಪಾದಕರೊಂದಿಗೆ ಹವ್ಯಕ ಕನ್ನಡದಲ್ಲಿ ನಿರರ್ಗಳವಾಗಿ ಭಾಷಿಸುತ್ತಾ ಅವರ ಸುಖ-ದುಃಖಗಳನ್ನು ವಿಚಾರಿಸುತ್ತಾಳೆ. ಹೊಸದಾಗಿ ಕಾರ್ ಚಲಾಯಿಸಲು ಕಲಿಯುತ್ತಿರುವ ಈ ಕಣ್ಮಣಿಯ ಮುಂದಿನ ಹಾದಿ ಎರಡೂ ಬದಿಯಲ್ಲಿ ಮನೋಹರ ದೃಶ್ಯಗಳನ್ನು ಹೊಂದಿದ್ದು, ಹಳ್ಳ-ಹಂಪುಗಳಿಲ್ಲದೆ ಸರಳ ತಿರುವುಗಳೊಂದಿಗೆ ಸುಗಮವಾಗಿ ಶ್ರೇಯೋಭಿವೃದ್ಧಿಯೆಡೆಗೆ ಸಾಗಲಿ ಎಂದು ಹಾರೈಸುತ್ತೇನೆ.











































