Anushree Bhat
Gouravaanvita Gurumaate
Graduated, ISE
ಶಿರಸಿಯ ಈ ಹುಡುಗಿ ತೃತೀಯ ವರ್ಷದ ವಿಷಯ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನೋಟ, ಮಾತು ಮತ್ತು ಯೋಚನಾ ಶಕ್ತಿ ಬಹಳ ಚೂಪು. ಕನ್ನಡ ವಿಭಾಗದ 'ವ್ಯಾಕರಣ ಪಂಡಿತೆ'ಯಾದ ಇವರ ಕಣ್ಣಿನಿಂದ ಕನ್ನಡ ಪದದೋಷಗಳು ಅವಿತು ಕೂರಲು ಸಾಧ್ಯವೇ ಇಲ್ಲ. ಕನ್ನಡ ಭಾಷಾ ಹಿಡಿತ ಬರವಣಿಗೆಯಲ್ಲಿ ಎಷ್ಟು ಇದೆಯೋ ಅದಕ್ಕೆ ಮೀರಿದ ಹಿಡಿತ ಮಾತನಾಡುವುದರಲ್ಲಿ ಇದೆ. ಭಾಷಾ ಸ್ಪಷ್ಟತೆ, ಉಚ್ಚಾರಣೆ ಮತ್ತು ಧ್ವನಿ ಏರಿಳಿತದಲ್ಲಿ ಅಚ್ಚುಕಟ್ಟು. ಸದಾಕಾಲ ಗರುಡಗಮನರಂತೆ ಜಾಗರೂಕರಾಗಿರುವ ಇವರ ಕಣ್ಣೋಟದಿಂದ ಬಚಾವ್ ಆಗುವುದು ಸುಲಭದ ಮಾತಲ್ಲ. ಹಿರಿಯರೇ ಇರಲಿ, ಕಿರಿಯರೇ ಇರಲಿ ಯಾರಿಗೂ ಹೆದರದೆ, ಸರಿ-ತಪ್ಪುಗಳ ಸರಿಯಾಗಿ ವಿಶ್ಲೇಷಿಸಿ ತಮ್ಮ ಅಭಿಪ್ರಾಯ ನೀಡುತ್ತಾಳೆ. "ಅನುಶ್ರೀಗೆ ತೃಪ್ತಿಯಾದ್ರೆ ನಮ್ಮ ಕೆಲ್ಸಾ ಪಕ್ಕ ಇದೇ ಬಿಡು" ಅಂತ ಸಂಪಾದಕರು ತಮ್ಮ ಕೆಲಸದ ಕೊನೆಯಲ್ಲಿ ಒಂದು ನಿಟ್ಟುಸಿರು ಬಿಟ್ಟರೆ ಅವರ ಅಂದಿನ ದಿನ ಸಾರ್ಥಕ.
ಕವಿತೆ ಬರೆಯುವುದೆಂದರೆ ಅನುಶ್ರೀಗೆ ನೀರು ಕುಡಿದಷ್ಟು ಸುಲಭದ ವಿಷಯ, ಸ್ನೇಹಿತರನ್ನು ರೇಗಿಸಲು ಕೂಡ ಕವಿತೆ ಬಳಕೆ ಮಾಡುತ್ತಾಳೆ. ಬರವಣಿಗೆಯಲ್ಲಿ ಕವಿತೆಗಳನ್ನು ಸೇರಿಸುವುದು ಇವಳ ವಿಶೇಷ ಕೌಶಲ್ಯ. ಹಿರಿಯ ಸಂಪಾದಕರಲ್ಲಿ ಇಷ್ಟು ಭಯ ಇಟ್ಟಿರುವ ಇವರನ್ನು ಕಂಡರೆ ಕಲಾ ವಿಭಾಗದ ಕಿರಿಯ ಸಂಪಾದಕರಿಗೆ ಭಯವೇ ಇಲ್ಲ, ಅನುಶ್ರೀಯ ಕಾಲು ಎಳೆಯುತ್ತಾ, ಮಾತಿಗೆ ಪ್ರತ್ಯುತ್ತರ ನೀಡುತ್ತಾ ಅವರನ್ನು ಪೀಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನುಶೀಯ ಮೇಲುಗೈ ಸಂಪಾದಕರ ಮೇಲೆ ಮುಂದುವರಿಯುತ್ತದೆಯೋ? ಇಲ್ಲವೋ? ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.
ಯಾರಾದರು ಮೆಚ್ಚುಗೆಯ ಮಾತನ್ನು ಅನುಶ್ರೀಗೆ ನೀಡಿದರೆ, “ಅಯ್ಯೋ! ಇದು ನನಗೆ ಮುಂಚೆನೆ ಗೊತ್ತಿತ್ತು ಕಣ್ರೀ” ಅಂತ ‘Selfove’ ತೋರಿಸಿಕೊಳ್ತಾಳೆ. ಚೆನ್ನಾಗಿ ತಯಾರಾಗಿ ಸದಾಕಾಲ ಮಿನುಗುವ ಇವಳ ಸಾಧಾರಣ ಲುಕ್ ಕೂಡ ಹಲವರ ಅಪರೂಪದ ಲುಕ್ ಆಗಿದೆ. ವಿಶೇಷ ಸಂಗತಿಗಳಲ್ಲಿ ನಯನಮನೋಹರ ಉಡುಗೆಯನ್ನು ತೊಟ್ಟು ಕ್ಯಾಮೆರಾಗೆ ವಿಶಿಷ್ಟ ಹಾಗು ವಿಭಿನ್ನ ಶೈಲಿಯ ಪೋಸ್‌ಗಳನ್ನು ನೀಡುವುದು ಇವಳ ಒಂದು ಕಲೆ. ಎಷ್ಟೇ ಚಿತ್ರಗಳನ್ನು ತೆಗೆಸಿಕೊಂಡರು ತೃಪ್ತಿಯಾಗದ ಇವರ ಮನವೊಲಿಸುವುದು ಛಾಯಾಗ್ರಾಹಕನಿಗೆ ಸವಾಲಿನ ವಿಷಯವೇ ಸರಿ. ಇವರ ಛಾಯಾಚಿತ್ರ ಗ್ರಹಣ ಮಾಡಲು ಭಿನ್ನ-ವಿಭಿನ್ನ ಭಂಗಿಗಳಲ್ಲಿ ಎದ್ದು ಕೂತು ನನ್ನ ಕಳೆದ ಬಾರಿಯ 'ಶಬ್ಡ್'ನ ಮೈ-ಕೈ ನೋವು ಇನ್ನ ಕಮ್ಮಿ ಆಗಿಲ್ಲ. ಸಂಪಾದಕರೆಲ್ಲ ಸೇರಿ ಔತಣಕೂಟಕ್ಕೆ ಹೋದರು, ಪ್ರವಾಸಕ್ಕೆ ಹೋದರು ಅಥವಾ ಸಂಪಾದಕ ಮಂಡಳಿಯ ಕಾರ್ಯಕ್ರಮವೇ ಆದರೂ ಇವಳ ಫೋಟೋಸೆಷನ್‌ಗಾಗಿ ಸ್ವಲ್ಪ ಸಮಯ ಕಾದಿರಿಸುತ್ತಾರೆ.
ಇವಳ ತ್ವಚೆಯ ರಹಸ್ಯ ತಿಳಿಯಲು ಹೊರಟ ನನಗೆ ಅಚ್ಚರಿಯೇ ಎದುರಾಗಿತ್ತು. ದರ್ಪಣದ ಹೊಳಪಿಗೆ ಸವಾಲೆಸೆಯುವ ಇವರ ಗಾಜಿನಂತಹ ತ್ವಚೆಯ ರಹಸ್ಯವೇ ಇವಳ ದೈನಂದಿನ ಹೊಸ 'skincare routine', ತ್ವಚೆಯ ಕಾಂತಿ ಬೆಳಗಿಸುವ ಹಣ್ಣು ತರಕಾರಿಯನ್ನು ಸದಾಕಾಲ ಸೇವಿಸುತ್ತಾಳೆ. ಇವಳ ಶುಚಿತ್ವ ಕಂಡರೆ ನೀವು ನಿಬ್ಬೆರಗಾಗುವುದರಲ್ಲಿ ಸಂದೇಹವೇ ಇಲ್ಲ. ಇವಳ ಒಡಕೊಣೆಗಾರರು ತಾವು ಮಾಂಸಾಹಾರಕ್ಕೆ ಬಳಸುವ ಪಾತ್ರೆಯನ್ನು ಕೊಡಲು ಹೆದರುತ್ತಾರೆ. ಹಾಗೆ ಮಾಡುವುದರಿಂದ ಅವರಿಗೆ ಪಾಪ ಬರುತ್ತದೆ ಎಂದು ನಂಬಿಸುವಲ್ಲ ಅನುಶ್ರೀ ಯಶಸ್ವಿಯಾಗಿದ್ದಾಳೆ. ಮತ್ತೊಂದು ಅಚ್ಚರಿಯ ಸಂಗತಿಯಂದರೆ ಇವಳು 'ಭಾಗ್ಯಲಕ್ಷ್ಮಿ' ಧಾರಾವಾಹಿಯ ದೊಡ್ಡ ಅಭಿಮಾನಿ, ಸನ್ನೆನುಡಿ ಕಲಿತಿರುವ ಇವಳು ದಿವ್ಯಂಗರ ಸಹಾಯಕ್ಕೆ ಒಂದು ತಂತ್ರಾಂಶ ಸೃಷ್ಟಿಸಬೇಕೆಂಬ ಹಂಬಲ ಇವಳದ್ದು.
ರೇಗಿಸುವುದರಲ್ಲಿ ಇವಳಿಗೆ ಸರಿಸಾಟಿ ಯಾರಿಲ್ಲದಿದರೂ ಬೇರೆಯವರ ಸಹಾಯಕ್ಕೆ ಸದಾ ಮಿಡಿಯುವ ಹೃದಯ ಇವಳದ್ದು, ಬೇರೆ ವಿಭಾಗದ ಸಂಪಾದಕರಿಗೆ ಕನ್ನಡದ ಮೇಲಿನ ಆಸಕ್ತಿ ಹೆಚ್ಚಿಸಲು ಅವರಿಗೆ ಕನ್ನಡದ ವಿಷಯಗಳನ್ನು ಹೇಳಿ ಕೊಡುತ್ತಾಳೆ. ಸಹಸಂಪಾದಕರಿಗೆ ಕಷ್ಟವೆನಿಸಿದರೆ ಆ ವಿಷಯವನ್ನು ಮತ್ತೆ ಹೇಳಿ ಕೊಡಲು ಹಿಂಜರಿಯುವುದಿಲ್ಲ, ತಾಳ್ಮೆಯಿಂದ ಎಷ್ಟು ಬಾರಿಯಾದರೂ ಪುನಾರಾವರ್ತಿಸುತ್ತಾಳೆ. ರಜೆ ಸಿಗುವ ಸುದ್ದಿ ಕೇಳಿದಕೂಡಲೇ ಇವಳ ತಲೆಗೆ ಮೊದಲು ಬರುವ ಆಲೋಚನೆಯೇ ಊರಿಗೆ ತೆರಳಿ ಮನೆಯವರ ಕಂಡು, ಮನೆಯಲ್ಲಿ ಕಾಲ ಕಳೆಯುವುದು.
ತಮ್ಮ ನೇರ ನುಡಿ, ಚೆಂದದ ಉಡುಗೆ, ಕ್ರಿಯಾತ್ಮಕ ಪಾದರಕ್ಷೆ, ಉದ್ದ ಸೆರಗಿನ ಸೀರೆ, ಕಣ್ಮನ ಸೆಳೆವ ನೋಟ, ಕನ್ನಡದ ಮೇಲಿನ ಹಿಡಿತ ಮತ್ತು ಒಲವು ಎಂದು ಕಮ್ಮಿಯಾಗದೆ ಮತ್ತಷ್ಟು ಚಿಮ್ಮಿ ಪಸರಿಸಲಿ ಎಂದು ಈ ಮೂಲಕ ಆಶಿಸುತ್ತ, ಅವರ ಉಜ್ವಲ ಭವಿಷ್ಯಕ್ಕೆ ಶುಭಕೋರುತ್ತೇನೆ.











































