Pruthvi K P
"Born to be ossum"
Graduated, ISE
ಸಂಪಾದಕ ಮಂಡಳಿಯಲ್ಲಿ ಪುಟ್ಟಿ ಎಂದು ಪ್ರಸಿದ್ಧವಾಗಿರುವ ಪೃಥ್ವಿಯು ಯಾರೇ ಆದರೂ ಸರಿಯೇ ಅವರನ್ನು ಚಟ್ ಪಟ್ ಪಟಾಕಿಯಂತೆ ಮಾತನಾಡಿಸುವವಳು. ಹಿಂಜರಿಕೆಯಿಲ್ಲದೆ introvertಗಳಿಂದ ಹಿಡಿದು extrovertಗಳವರೆಗೆ ಎಲ್ಲರನ್ನೂ ಮಾತನಾಡಿಸುವವಳು. ನಿರಂತರ ಮಾತನಾಡಿ ಇವಳ ಬಾಯಿಗೆ ಡಣಿವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಇವಳ ಮಾತು ಕೇಳುವವರಿಗಂತೂ ಕೇಳಿ-ಕೇಳಿ ದಣಿವಾಗಲಾರದು. ಏಕೆಂದರೆ ಈಕೆಯು ಕನ್ನಡದ ಹಳೆ ಸಿನಿಮಾಗಳಿಂದ ಹಿಡಿದು ಹೊಸ ವೆಬ್‌ಸಿರೀಸ್‌ಗಳವರೆಗೂ ಎಲ್ಲವನ್ನೂ ಅರಿತು ಮುಂದಿರುವವರ vibeಗೆ ಸರಿಹೊಂದುವಂತೆ ಸಂವಹನ ನಡೆಸಬಲ್ಲಳು. ಇವಳಿಲ್ಲದೆ meetಗಳಂತೂ ಸದ್ದುಗದ್ದಲವಿಲ್ಲದ ಸಂತೆಯಂತೆ ಬಿಕೋ ಎನ್ನುತ್ತಿರುತ್ತವೆ.
ಸಂಪಾದಕ ಮಂಡಳಿಯಲ್ಲಿ ಕನ್ನಡ ವಿಭಾಗಕ್ಕೆ ತಕ್ಕಂತೆ ಅಣ್ಣಾವ್ರ ಕಟ್ಟಾ ಅಭಿಮಾನಿಯಾಗಿದ್ದು, ಇದಕ್ಕೆ ಸಾಕ್ಷಿಯೆಂಬಂತೆ “ಏನು ಪಾರ್ಥ? ಏನು ನಿನ್ನ ಭುಜಬಲದ ಪರಾಕ್ರಮ...” ಎಂದು ಮೊಬೈಲ್ನಲ್ಲಿ ringtone ಇಟ್ಟುಕೊಂಡಿರುವವಳು. ಹಳೆಕಾಲದ ಸಿನಿಮಾಗಳ ಹಿಟ್ ಹಾಡುಗಳ lyricsಗಳನ್ನು ನಿರರ್ಗಳವಾಗಿ ಹಾಡಬಲ್ಲವಳಾಗಿದ್ದಾಳೆ. ಬೋರ್ಡನ ಕೆಲಸ ಬಂದರೆ ಕೊಟ್ಟ ಗಡುವಿನೊಳಗೆ ಮುಗಿಸುವ ಈಕೆಯು ‘ಸೋಂಬೇರಿ’ ಎಂದು ಬರೆದಿರುವ ಟೀ-ಶರ್ಟನ್ನು ಹಾಕಿಕೊಂಡು ಮಂಡಳಿಯ ಸದಸ್ಯರ ಮುಂದೆ ಪ್ರತ್ಯಕ್ಷಳಾಗುತ್ತಾಳೆ. ಮಾರ್ಕೆಟ್‌ಗೆ ಬಂದಿರುವ ಹೊಸ ತಿಂಡಿ ತಿನಿಸುಗಳಲ್ಲಿ ವಿಚಿತ್ರ ರುಚಿ ಮತ್ತು ಬಾಯಲ್ಲಿ ಇಡಲಾಗದ ತಿನಿಸುಗಳನ್ನು ಹುಡುಕಿ meetಗೆ ಹೇಗೆ ತರುತ್ತಾಳೋ ದೇವರೇ ಬಲ್ಲ. ಮಕ್ಕಳು ಖರೀದಿಸುವ kinder joyಲ್ಲಿ ಹ್ಯಾರಿಪೋರ್ಟರ್‌ನ ಚಿಕ್ಕ ಪುತಲಿಯು ಸಿಕ್ಕಿರುವದನ್ನು ಖುಷಿಯಿಂದ ಹೇಳಿಕೊಳ್ಳುತ್ತಾಳೆ.
ತನ್ನ ಮನೆಗೆ ಯಾರನ್ನಾದರೂ ಕರೆದುಕೊಂಡು ಹೋದರೆ ತಾನು ಸಂಗ್ರಹಿಸಿದ ಎಲ್ಲ ವಸ್ತುಗಳನ್ನು ತೋರಿಸಿ ಅವುಗಳ ಇತಿಹಾಸವನ್ನು ಹೇಳುತ್ತಾಳೆ. ಇವಳು ಸಾಮಾನ್ಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಂತೆ ನಿಶಾಚಾರಿಯಾಗಿರದೆ ರಾತ್ರಿ 10:00 ಗಂಟೆಗೆ ಮಲಗುವ ಅಭ್ಯಾಸವನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲದೆ ಮಾತನಾಡುತ್ತಲೇ ನಿಧಾನವಾಗಿ ನಿದ್ದೆಗೆ ಜಾರುವ ಕಲೆಯು ಇವಳಿಗೆ ಕರಗತವಾಗಿದೆ. ಮೊದಮೊದಲು ಸ್ಕೂಟಿಯಲ್ಲಿ ಡಬಲ್ ಓಡಿಸಲು ಹೆದರುತ್ತಿದ್ದ ಪೃಥ್ವಿಯು ಈಗ ಯಾವುದೇ ಹೆದರಿಕೆಯಿಲ್ಲದೆ ಟ್ರಿಪಲ್ ಕೂಡ ಓಡಿಸಬಲ್ಲಳು.
ಇಷ್ಟರಮಟ್ಟಿಗೆ extrovert ಆಗಿದ್ದರೂ ಬಹಿರ್ಮುಖಿಗಳ ನೆಚ್ಚಿನ ಸಾಮಾಜಿಕ ಜಾಲತಾಣವಾದ ‘ಇನ್ಸ್ಟಾಗ್ರಾಮ್’ನಿಂದ ಸನ್ಯಾಸತ್ವ ಸ್ವೀಕರಿಸಿ ವಾಟ್ಸಾಪ್ ಮತ್ತು ಲಿಂಕ್ಡ್ಇನ್ ಅಲ್ಲಿ ಜೀವಿಸುವಳೆಂದು Mark Zuckerbergನಿಂದ ತಿಳಿದುಬಂದಿದೆ. ಮನೆಯಲ್ಲಿ ತುಂಬಾ ಮುದ್ದಿನಿಂದ ಬೆಳೆಸಿದ ಹುಡುಗಿ ಇವಳಾಗಿದ್ದು ಸಂಜೆ 7:00 ಗಂಟೆ ಆದರೆ ಸಾಕು ಇವಳ ಮನೆಯಿಂದ alarm ಎಂಬಂತೆ ಕಾಲ್ ಬರುತ್ತದೆ. ಇವಳು ಇವಳ ಅಜ್ಜಿಗೆ ತುಂಬಾ ಹತ್ತಿರವಾಗಿದ್ದು ಎಲ್ಲರ ಪ್ರೀತಿಪಾತ್ರರಾಗಿರುವಳು. ಸದ್ಯದಲ್ಲಿ ಮನೆಗುಬ್ಬಿಯಾಗಿರದೇ ಹಲವಾರು ಕಡೆ ಟ್ರಿಪ್‌ಗೆ ಹೋಗಿ ಬಂದಿರುವಳೆಂದು ಮೂಲಗಳಿಂದ ತಿಳಿದುಬಂದಿದೆ.
ಪಟ ಪಟ ಅಂತ ಮಾತಾಡೋ ನಮ್ ಪಟ ಪಟ ಪೃಥ್ವಿಗೆ ತುಂಬಾ ತುಂಬಾ ಒಳ್ಳೇದಾಗ್ಲಿ ಅಂತ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ.











































